ಪೂರ್ಕಿನ್ಯೆ, ಜೊಹಾನಿಸ್ ಎವಾಂಜೆಲಿಸ್ಟ -
1787-1869. ಪ್ರಾಗ್ ಬಳಿಯ ಲೆಬೊಚೊವೀಸ್‍ನಲ್ಲಿ ಹುಟ್ಟಿ ಪ್ರಾಯೋಗಿಕ ಅಂಗಕ್ರಿಯಾಶಾಸ್ತ್ರ, ಅಂಗಾಂಶಶಾಸ್ತ್ರ, ಪಿಂಡಶಾಸ್ತ್ರ, ಬ್ರಹ್ಮ ವಿದ್ಯೆ ಇವುಗಳಲ್ಲಿ ಮಹಾ ಸಂಶೋಧಕನಾಗಿ ಮೊದಲಿಗನೆನಿಸಿದ್ದ ಜಕೊಸ್ಲೊವಾಕಿಯದ ಅಂಗಕ್ರಿಯ ವಿಜ್ಞಾನಿ. ರೋಮನ್ ಕ್ಯಾತೊಲಿಕ್ ಶಿಕ್ಷಕ ವೃಂದದಲ್ಲಿದ್ದು ಉಪದೇಶಿಯಾಗಲಿದ್ದವ ಇದ್ದಕ್ಕಿದ್ದ ಹಾಗೆ ವೈದ್ಯನಾಗಬೇಕೆಂದು ನಿರ್ಧರಿಸಿ ಪ್ರಾಗಿನಲ್ಲಿ ವೈದ್ಯ ಪದವೀಧರನಾದ. ಬ್ರೆಸ್ಲೋನಲ್ಲಿ ಅಂಗಕ್ರಿಯಾಶಾಸ್ತ್ರದಲ್ಲಿ ಪೀಠವನ್ನು ಸ್ಥಾಪಿಸಿ (1823) ಅಲ್ಲಿಯೂ ಆಮೇಲೆ ಪ್ರಾಗಿನಲ್ಲಿಯೂ ಅಂಗಕ್ರಿಯಾಶಾಸ್ತ್ರದ ಪ್ರಾಧ್ಯಾಪಕನಾಗಿದ್ದ (1832-50). ಇಪ್ಪತ್ತೇಳು ವರ್ಷಗಳಲ್ಲಿ ಮುಖ್ಯ ಶೋಧನೆಗಳನ್ನು ನಡೆಸಿ ಅಲ್ಲಿಯೇ ಅಂಗಕ್ರಿಯಾಶಾಸ್ತ್ರದ ಮೊದಲ ಪ್ರಯೋಗಾಲಯಗಳಲ್ಲಿ ಒಂದಾದ ಸಂಸ್ಥೆಯನ್ನು ಸ್ಥಾಪಿಸಿದ (1842). ಪ್ರಾಗಿನಲ್ಲೂ ಅದೇ ತೆರನ ಇನ್ನೊಂದು ಪೀಠವನ್ನು ಸ್ವೀಕರಿಸಲು ಕರೆ ಬಂದಾಗ (1850) ಈತ ರಾಜಕೀಯಕ್ಕಿಳಿದ. ಅಂಗಾಂಶಶಾಸ್ತ್ರಜ್ಞನಾಗಿ ಇವನದು ದೊಡ್ಡ ಹೆಸರು. ಸೂಕ್ಷ್ಮದರ್ಶಕ ಅಧ್ಯಯನದಲ್ಲಿ ವಿಶೇಷ ಪರಿಣತಿ ಪಡೆದ. ಈತ ಚರ್ಮದಲ್ಲಿಯ ಸ್ವೇದ ಗ್ರಂಥಿಗಳನ್ನೂ ಅವುಗಳ ಸಾಗುನಾಳಗಳನ್ನೂ ವರ್ಣಿಸಿದ. ತಲೆದಿಪ್ಪಟೆ, ಕಿವುಡುತನ, ಭಾಸೆಗಳ (ಸಿಲಿಯ) ಚಲನೆ, ಅರಗಣೆ ಇವನ್ನು ಕುರಿತು ಸಂಶೋಧನೆ ನಡೆಸಿದ. ಅಂಗಾಂಶಶಾಸ್ತ್ರದಲ್ಲಿ ಗ್ಲೇಸಿಯಲ್ ಅಸೆಟಿಕಾಮ್ಲ, ಪೊಟ್ಯಾಸಿಯಮ್ ಡ್ರೆಕ್ರೊಮೇಟ್ ಇವನ್ನು ಮೊದಲು ಬಳಸಿದವ ಇವನೇ. ಊತಕ ಮಾದರಿಗಳನ್ನು ಕೈಯಲ್ಲಿ ಹಿಡಿದುಕೊಂಡು ಕ್ಷೌರದ ಕತ್ತಿಯಿಂದ ಕತ್ತರಿಸುವುದರ ಬದಲಾಗಿ ಇನ್ನೂ ತೆಳು ಪದರಗಳನ್ನು ಬೇಗನೆ ನಿರಾಯಾಸವಾಗಿ ಕತ್ತರಿಸಬಲ್ಲ ಮೈಕ್ರೊಟೋಮ್ ಎಂಬ ಕಿರುಗತ್ತರಿಯನ್ನು ಮೊದಲಿಗೆ ಬಳಸಿದ. ಬೇರೆ ಬೇರೆ ಜೀವಿಗಳ ಊತಕಗಳು ಒಂದೇ ತೆರನ ಹರಳುಗಳನ್ನು ರೂಪಿಸುವುದನ್ನು ಗುರುತಿಸಿ, ಗಿಡಮರಗಳ ಜೀವಕಣಗಳಲ್ಲಿ ಇರುವುದರೊಂದಿಗೆ ಹೋಲಿಸಿ ವರದಿ ಮಾಡಿದ್ದಾನೆ (1837). ಇದರ ಅನ್ವಯವಾಗಿ, ಕೋಶಗಳಲ್ಲಿಯ ಜೀವಂತ ವಸ್ತುವಿಗೆ ಪ್ರೋಟೊಪ್ಲಶಸ್ಮ್ (ಜೀವರಸ) ಎಂದು ಹೆಸರಿಟ್ಟ (1839). ಜಾರುಗಾಜಿನ (ಸ್ಲೈಡ್) ಮೇಲೆ ಅಂಗಾಂಶ ಮಾದರಿಗಳನ್ನು ದೂಪದ ರಸದಲ್ಲಿ (ಬಾಲ್ಷಮ್) ಕೆಡದಂತೆ ಇಡುವುದನ್ನು ಬಳಕೆಗೆ ತಂದ.

ಪೂರ್ಕಿನೈ ಮೊತ್ತಮೊದಲಿಗೆ ಕಂಡುಹಿಡಿದ ಅನೇಕ ವಸ್ತುಗಳಿಗೆ ಇವನ ಹೆಸರೇ ಈಗಲೂ ಉಳಿದಿದೆ. ಕಿರಿ ಮಿದುಳಿನ ರಗಟೆಯಲ್ಲಿ ವಿಶಿಷ್ಟವಾಗಿ ಹೂಜಿಯಾಕಾರದಲ್ಲಿರುವ ಪೂರ್ಕಿನೈ ನರಕಣಗಳು, ಗುಂಡಿಗೆಯ ಒಳ ಪರೆಯಡಿಯಲ್ಲಿ, ಅದರ ನರಮಂಡಲವಾಗಿರುವ ಗುಂಡಿಗೆಯ ದೊಡ್ಡ ಸ್ನಾಯುಕಣಗಳ ಮಾರ್ಪಟ್ಟ ತಂತುಗಳ ಹೆಣೆಯಲಾದ ಪೂರ್ಕಿನೈ ನರಮಂಡಲ, ಅಂಡಾಣುವಿನ ನಡುಬೀಜವಾದ (ನ್ಯೂಕ್ಲಿಯಸ್) ಪೂರ್ಕಿನೈಯ ಅಂಕುರದ ಕೋಶಿಕ (ಜರ್ಮಿನಲ್ ವೆಸಿಕಲ್). ಕಣ್ಣುಶಾಸ್ತ್ರದಲ್ಲಿ ಮನಸ್ಸಿಗೆ ತೋರುವ ರೂಪಗಳನ್ನೂ ಮರುಬಿಂಬಗಳನ್ನೂ ಸಂಶೋಧಿಸಿದ. ಕಣ್ಣುಗುಡ್ಡೆಯೊಳಗಡೆ ಕಣ್ಣಿನ ನೋಟಕ್ಕೆ ಕಾರಣವಾಗಿರುವ ಅಕ್ಷಿಪಟದ (ರೆಟೀನ) ಮೇಲೆ ಬೀಳುವ ಅಲ್ಲಿಯ ರಕ್ತನಾಳಗಳ ನೆರಳಿನ ಬಿಂಬಗಳಿಗೆ ಈಗಲೂ ಪೂರ್ಕಿನೈ ಬಿಂಬಗಳೆಂದು ಹೆಸರಿದೆ. ಬೆಳಕಿನ ಉಜ್ಜ್ವಲತೆಯನ್ನು ತಗ್ಗಿಸಿದಾಗ, ಒಂದೇ ಪ್ರಕಾಶದಲ್ಲಿದ್ದರೂ ಬೇರೆ ಬೇರೆ ಬಣ್ಣಗಳಲ್ಲಿರುವ ಕ್ಷೇತ್ರಗಳು ಅಸಮವಾಗಿ ಪ್ರಕಾಶಿಸುವುದರಿಂದ ಕತ್ತಲಿನಲ್ಲಿ ನೀಲಿ ಮತ್ತು ಕೆಂಪು ಬಣ್ಣಗಳ ಹೊಳಪಿನಲ್ಲಿ ಆಗುವ ಬದಲಾವಣೆಗೆ ಪೂರ್ಕಿನೈ ಸಂಘಟನೆ ಎಂದು ಹೆಸರಿದೆ. ಕಣ್ಣಿನ ಪಾರದರ್ಶಕ ಪಟಲ (ಕಾರ್ನಿಯ) ಮತ್ತು ಮಸೂರದ ಮೇಲೆ ಕಾಣುವ ಬಿಂಬಗಳಿಗೂ ಪೂರ್ಕಿನೈ ಹೆಸರಿದೆ. 

ಬೆರಳಿನ ಅಚ್ಚುಗಳ ವಿಶಿಷ್ಟತೆಯನ್ನು ಇವನು ಆಗಲೇ (1825) ಕಂಡಿದ್ದ. ಈತ ಕವಿಯೂ ಆಗಿದ್ದುದರಿಂದ ಗಯಟೆ ಮತ್ತು ಷಿಲ್ಲರ್‍ರ ಕವಿತೆಗಳನ್ನು ಚೆಕ್ ನುಡಿಗೆ ಅನುವಾದಿಸಿದ. ಪೂರ್ಕಿನೈಯ ಆಮ್ನಿಯ ಅಪೆರದ ಪ್ರಕಟಣೆ 1918ರಲ್ಲಿ ಪ್ರಾರಂಭವಾಯಿತು. ಕೊನೆಯ ವರ್ಷಗಳಲ್ಲಿ ಈತ ಚೆಕ್ ರಾಷ್ಟ್ರೀಯತೆಯ ಪರಮ ಪ್ರಚಾರಕನಾಗಿದ್ದ.					(ಡಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ